Tuesday, December 1, 2009

ಗೋ. . ಕಪಿ (ಗೋಪಿಕಾ) ಯಾಕೆ ಹೀಗೆ ಕಾಡ್ತೀಯಾ? . .




ಆಹಾರ ಎಷ್ಟು ಮುಖ್ಯವೋ ದಣಿದ ದೇಹಕ್ಕೆ ನಿದ್ದೆ ಸಹ ಅಷ್ಟೇ ಅವಶ್ಯಕ. ಇಡೀ ಜೀವ ಜಗತ್ತು ಬದುಕುಳಿದಿರುವುದೇ ನಿದ್ದೆಯಿಂದ ಎಂದರೆ ಆಶ್ಚರ್ಯವಾಗುತ್ತದೆ. ಭೂಮಂಡಲದ ಮೇಲಿನ ಸಕಲ ಜೀವರಾಶಿಗಳು ನಿದ್ದೆ ಮಾಡುತ್ತವೆ ಎಂಬ ವಿಚಾರವನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ. ಕೆಲವರಿಗೆ ಸುನಾಯಾಸವಾಗಿ ನಿದ್ದೆ ಬಂದರೆ ಮತ್ತೆ ಕೆಲವರು ಹಾಸಿಗೆ ತುಂಬ ಉರುಳಾಡುತ್ತಿರುತ್ತಾರೆ. ನಿದ್ರಾ ದೇವಿಯನ್ನು ಆವಾಹಿಸಿಕೊಳ್ಳಲು ಇಲ್ಲಿವೆ ಒಂದಷ್ಟು ಮಂತ್ರಗಳು!

1. ಸಮಯಕ್ಕೆ ಬಂಧಿಯಾಗಿ: ಹೊತ್ತು ಗೊತ್ತಲ್ಲದ ಸಮಯದಲ್ಲಿ ಹಾಸಿಗೆಗೆ ಮೈಚಾಚುವುದರಿಂದ ನಮ್ಮ ದೇಹದಲ್ಲಿನ ಜೈವಿಕ ಗಡಿಯಾರದ ಸಮಯ ಸಹ ಏರುಪೇರಾಗುತ್ತದೆ. ಚಿಕ್ಕ ಮಕ್ಕಳಿಗೆ ನಿದ್ದೆಯ ಸಮಯ ಹೇಗೆ ನಿಗದಿ ಮಾಡಿರುತ್ತೇವೋ ನಮಗೂ ಹಾಗೆಯೇ ನಿದ್ದೆಯ ಸಮಯವನ್ನು ನಿಗದಿ ಪಡಿಸಿಕೊಳ್ಳಬೇಕು. ವಾರಾಂತ್ಯದ ರಜಾ ದಿನಗಳಲ್ಲಿ ಸಹ ಈ ವೇಳಾಪಟ್ಟಿಯನ್ನು ಯಾವುದೇ ಕಾರಣಕ್ಕೂ ಮೀರದಂತೆ ಲಕ್ಷ್ಮಣ ರೇಖೆಯನ್ನು ನೀವೇ ಎಳೆದುಕೊಳ್ಳಬೇಕು. ರಜಾ ದಿನಗಳಲ್ಲಿ ನಿದ್ದೆಗೆಡುವುದರಿಂದ ಮಾರನೆಯ ದಿನ ಬೆಳಗ್ಗೆ ಬೆಳಕರಿಯುವುದು ತಡವಾಗುತ್ತದೆ. ಆ ದಿನವೆಲ್ಲಾ ಏನೋ ಆಯಾಸ, ಆಲಸ್ಯ, ಆಕಳಿಕೆ ಕಾಡುತ್ತ್ತಿರುತ್ತದೆ. ಆದ ಕಾರಣ ರಜಾ ದಿನಗಳಲ್ಲೂ ನಿಗದಿತ ಸಮಯಕ್ಕೆ ಸರಿಯಾಗಿ ನಿದ್ರೆಗೆ ಜಾರಿಕೊಳ್ಳಿ.

2. ಹಗಲು ನಿದ್ದೆ ಬೇಡ: ಆದಷ್ಟು ಹಗಲು ವೇಳೆ ನಿದ್ದೆ ಮಾಡುವುದನ್ನು ತಪ್ಪಿಸಿ. ಹಗಲಲ್ಲಿ ನಿದ್ದೆ ಮಾಡುವುದರಿಂದ ರಾತ್ರಿ ನಿದ್ದೆಗೆ ಹೊಡೆತ ಬೀಳುತ್ತದೆ. ಒಂದು ವೇಳೆ ಹಗಲಲ್ಲೂ ನಿದ್ದೆ ಮಾಡಲೇ ಬೇಕಾದರೆ 20 ನಿಮಿಷಗಳಷ್ಟು ಕಾಲ ಮಾತ್ರ ನಸು ನಿದ್ದೆ ಮಾಡಿ ಉತ್ಸಾಹವಂತರಾಗಬಹುದು.

3. ವ್ಯಾಯಾಮ ಮರೆಯಬೇಡಿ: ನಿಯಮಿತವಾದ ವ್ಯಾಯಾಮ ಉತ್ತಮ ನಿದ್ರೆಗೆ ಸಹಕಾರಿ. ವ್ಯಾಯಾಮದಿಂದ ದೇಹದ ಕೀಲು ಮತ್ತು ಸ್ನಾಯುಗಳು ನಿದ್ರೆಯಲ್ಲಿ ಚೇತರಿಸಿಕೊಳ್ಳುತ್ತವೆ. ದಿನನಿತ್ಯ 20 ರಿಂದ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಸುಖಕರವಾದ ನಿದ್ದೆ ಪ್ರಾಪ್ತಿಯಾಗುತ್ತದೆ. ವ್ಯಾಯಮನ್ನು ಬೆಳಗ್ಗೆ ಅಥವಾ ಸಂಜೆ ಮಾಡಬೇಕೆ ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳಿ. ವ್ಯಾಯಾಮ ದೇಹಕ್ಕೆ ಉತ್ತೇಜನ ನೀಡುತ್ತದೆ. ನಿದ್ದೆ ಮಾಡುವುದಕ್ಕೂ ಮುನ್ನ ಏರೋಬಿಕ್ ನಂತಹ ಚಟುವಟಿಕೆಗಳನ್ನು ಮಾಡುವುದು ಸೂಕ್ತವಲ್ಲ. ಈ ರೀತಿಯ ಚಟುವಟಿಕೆ ನಿಮ್ಮ ಅಮೂಲ್ಯವಾದ ನಿದ್ದೆಯನ್ನು ಅಪಹರಿಸುತ್ತದೆ.

4. ಬಿಸಿ ನೀರಿನ ಸ್ನಾನ: ನಿದ್ದೆಗೂ ಮುನ್ನ ಉಗುರು ಬೆಚ್ಚಗಿನ ನೀರಲ್ಲಿ (ಷವರ್ ಬಾತ್) ಸ್ನಾನ ಮಾಡಿದರೆ ಸೊಂಪಾಗಿ ನಿದ್ದೆ ಬರುತ್ತದೆ. ಬಿಸಿ ನೀರಿನ ಸ್ನಾನ ಬಿರುಸಾದ ಸ್ನಾಯುಗಳನ್ನು ಸಡಿಲಗೊಳಿಸುತ್ತದೆ.

5. ನಿದ್ರೆಗೂ ಮುನ್ನ ಭೂರಿ ಭೋಜನ ಬೇಡ: ಮಲಗುವುದಕ್ಕೂ ಮುನ್ನ ಹೆಚ್ಚು ಖಾರ, ಮಸಾಲೆ ಹಾಗೂ ಭೂರಿ ಭೋಜನ ಮಾಡುವುದನ್ನು ತಪ್ಪ್ಪಿಸಿ. ನಿಮ್ಮ ನಿದ್ರೆಗೂ ಊಟಕ್ಕೂ ನಡುವಿನ ಅಂತರ 2 ಗಂಟೆಗಳಷ್ಟಿರಲಿ. 2 ಗಂಟೆಗಳ ಅಂತರ ಜೀರ್ಣಕ್ರಿಯೆಗೆ ಸಹಕರಿಸುತ್ತದೆ(ಅಥವಾ ಜೀರ್ಣಕ್ರಿಯೆ ಆಗ ಶುರುವಾಗಿರುತ್ತದೆ). ಜೀರ್ಣಕ್ರಿಯೆ ಆಗಷ್ಟೆ ಮೊದಲಾದ ಕಾರಣ ದೇಹ ಅನಾಯಾಸವಾಗಿ ಸುಖ ನಿದ್ರೆ ಬಯಸುತ್ತದೆ.

6. ಕೆಫೀನ್ ಪದಾರ್ಥಗಳನ್ನಿ ನಿಷೇಧಿಸಿ: ಕಾಫಿ, ಚಹ, ಕೋಲಾದಂತಹ ಪದಾರ್ಥಗಳು ರಾತ್ರಿಯ ಸುಖ ನಿದ್ದೆಗೆ ಮಾರಕ. ಮಲಗುವ ಮುನ್ನ ಈ ಪದಾರ್ಥಗಳ ಸೇವನೆ ಬೇಡ.

7. ಕಥೆ, ಕಾದಂಬರಿಗಳನ್ನು ಓದಿ: ಪುಸ್ತಕದಲ್ಲಿ ನೀವು ತಲ್ಲೀನರಾದರೆ ಅವು ಮತ್ತೊಂದು ಲೋಕಕ್ಕೆ ನಿಮ್ಮನ್ನು ಕರೆದೊಯ್ಯುತ್ತವೆ.ನಿದ್ದೆಗೂ ಮುನ್ನ ನಿಮಗಿಷ್ಟವಾದ ಕಥೆ, ಕಾದಂಬರಿ ಪುಸ್ತಕಗಳನ್ನು ಓದುವುದರಿಂದ ಹಾಗೇ ನಿದ್ದೆಗೆ ಜಾರಿಕೊಳ್ಳಬಹುದು.

8. ಕೊಠಡಿ ಸ್ವಲ್ಪ ತಣ್ಣಗಿರಲಿ: ಕೊಠಡಿಯಲ್ಲಿ ತಂಗಾಳಿ ಮೈಸೋಕುತಿರಲಿ. ತಣ್ಣನೆಯ ಗಾಳಿಗಾಗಿ ಕಿಟಕಿಗಳನ್ನು ತೆರೆದಿಡಿ. ಕೊಠಡಿಯಲ್ಲಿ ಸೆಖೆಯ ವಾತಾವರಣವಿದ್ದರೆ ನಿದ್ರಾ ದೇವಿ ಆವರಿಸುವುದಿಲ್ಲ.

9. ನಿಶ್ಯಬ್ದವಾಗಿ ನಿದ್ರಿಸಿ: ಸಂಗೀತ ಸಾಧನ ಅಥವಾ ದೂರದರ್ಶನ ಎಚ್ಚೆತ್ತುಕೊಂಡಿದ್ದರೆ ನಿದ್ದೆ ಹೇಗೆ ಬರುತ್ತದೆ. ಅವಕ್ಕೂ ನಿದ್ದೆ ಮಾಡಲು ಬಿಟ್ಟ್ಟು ನೀವೂ ನೆಮ್ಮದಿಯಾಗಿ ನಿದ್ದೆ ಮಾಡಿ. ಕೆಲವರಿಗೆ ಸಂಗೀತ ಇಲ್ಲದಿದ್ದರೆ ನಿದ್ದೆ ಬರುವುದಿಲ್ಲ ಅಂತವರನ್ನು ಹೊರತು ಪಡಿಸಿ ಈ ಸಲಹೆ ನೀಡಲಾಗಿದೆ.

10. ಮದ್ಯ ಸೇವನೆ ಬೇಡ: ಆಲ್ಕೋಹಾಲ್ ಹಾಗೂ ಆಲ್ಕೋಹಾಲ್ ಯುಕ್ತ ಪದಾರ್ಥಗಳು ಜೈವಿಕ ಕ್ರಿಯೆಗಳನ್ನು ಕುಗ್ಗಿಸುತ್ತವೆ. ಬೇಗನೆ ನಿದ್ದೆ ಬರುವಂತೆಯೂ ಮಾಡುತ್ತವೆ. ಹಾಗೆಯೇ ನಿದ್ರೆಯಲ್ಲಿ ಎಚ್ಚೆತ್ತುಕೊಳ್ಳುವಂತೆಯೂ ಮಾಡುತ್ತದೆ. ನಿದ್ದೆಯಲ್ಲಿ ಬೆಚ್ಚಿಬೀಳಿಸುವ ಕನಸುಗಳಿಗೂ ಆಲ್ಕೊಹಾಲ್ ಕಾರಣವಾಗುತ್ತದೆ. ಹಾಗಾಗಿ ಸುಖ ನಿದ್ದೆಗೂ ಮದ್ಯಪಾನಕ್ಕೂ ಎಣ್ಣೆ ಸೀಗೆಕಾಯಿ ನಂಟು ಎಂಬುದನ್ನು ಮರೆಯಬೇಡಿ.

No comments: