Monday, October 26, 2009

ಕೋತಿಮರೀ!

ಕೋತಿಮರೀ!

ಮೊದಲೆಲ್ಲ ನಿನ್ನ ಹೀಗೆ ಕರಿಯೋಕೆ ಎಷ್ಟು ಚೆನ್ನಾಗಿರ್ತಿತ್ತು ಗೊತ್ತ? ಹೀಗೆ ಕರಿಯೋದೆ ಒಂದು ಹಬ್ಬ. ನಿನ್ನ ತುಂಟತನ, ನಿನ್ನ ಕಪಿಚೇಸ್ಟೆ, ನಿನ್ನ ಹುಡುಗುತನ, ಮತ್ತು ಕೋತಿ……..ಅಂತ ಹೇಳಿ ನೀನು ಹಲ್ಕಿರಿಯುತ್ತಿದ್ದ ನಿನ್ನ ಆ ನಿಶ್ಕಲ್ಮಶ ನಗು ಇದ್ಯಾವುದನ್ನೂ ನನ್ನಿಂದ ಮರಿಯೋಕಾಗುತ್ತಿಲ್ಲ. ನೀನು ಮಾತಿನ ಮಲ್ಲಿ, ಒಂದು ಸಲವು ನಾನು ನಿನ್ನ ಮುಂದೆ ಗೆದ್ದಿದ್ದಿಲ್ಲ ಬರೀ ಸೋತಿದ್ದೆ ಸೋತಿದ್ದು. ಆದರೂ ಪ್ರತಿ ಸಲ ಸೋತಾಗಲು ನಾನೆ ಗೆದ್ದೆ ಅನ್ನುವಷ್ಟು ಖುಷಿ, ಆದರೂ ನೀನು ನನ್ನವಳಲ್ಲ ಅನ್ನುವ ಒಂದೇ ಒಂದು ದೊಡ್ಡ ಸೋಲಿದೆಯಲ್ಲ? ಈ ಸೋಲು ಯಾವತ್ತು ನನ್ನ ಈ ಮುಖದಲ್ಲಿ ನಗುವನ್ನ ಕಾಣದಿರುವ ಹಾಗೆ ಮಾಡಿಬಿಡುತ್ತದೇನೊ..!!

ನನಗೆ ಯಾವುದನ್ನು ಮರಿಯೋದಕ್ಕೆ ಆಗುತ್ತಿಲ್ಲ. ಸುಮ್ಮನೆ ಮರೆತವನಂತೆ ನಾಟಕವಾಡುತ್ತೀನಿ ಅಷ್ಟೆ. ಸಮಸ್ತ ಮೊಬೈಲು ಕಂಪನಿಗಳು ನಮ್ಮಿಬ್ಬರಿಂದಾನೆ ಉದ್ಧಾರವಾದವೇನೊ. ಪ್ರತಿ ಸಲ ಮೊಬೈಲು ಕಳೆದುಕೊಂಡಾಗಲೂ ಕಾಯಿನ್ ಬೂಥುಗಳ ಗುಡಾಣದಂತಹ ಹೊಟ್ಟೆಗೆ ಬರ್ಜರಿ ಮೃಷ್ಟಾನ್ನ ಭೋಜನ ಮಾಡಿಸುತ್ತಿದ್ದೆವು ನೆನಪಿದೆಯಾ? ಮತ್ತೆ ನನ್ನ ಕಡುಗಪ್ಪು ಕೈ ಹಿಡಿದು ನೀನು ರೋಡು ದಾಟಿಸುತ್ತಿದ್ದ ಪರಿಯ ನೆನೆಸಿಕೊಂಡರೇ ಸಾಕು.. ದೇವರೇ.. ಈ ಕೈ ಯಾವತ್ತು ಸಡಿಲಾಗದಂತೆ ಶಾಪ ಕೊಟ್ಟುಬಿಡು ಅಂತ ಅದೆಷ್ಟು ಸಲ ಗೋಗರೆದಿದ್ದೆನೊ..! ನೆನಪಿದೆಯಾ? ಮೊದಲ ಸಲ ನಿನ್ನ ಮುಂದೆ ನಿಂತಾಗ ಬೆವರುತ್ತಿದ್ದ ಪರಿ? “ಯಾಕೊ ಹೀಗೆ ನಡುಗುತ್ತಿದ್ದೀಯ?” ಅಂತ ನೀನು ಕಿಚಾಯಿಸಿದರೆ. “ಬಿಸಿಲಲ್ಲಿ ಬಂದೆ ಅಲ್ಲವಾ ಅದಕ್ಕೆ” ಅಂದ ನಾನು ನಿನ್ನ ಮುಂದೆ ಮಂಗನಾಗಿದ್ದು? ಯಾಕಂದರೆ ಅದು ಜೂನ್ ತಿಂಗಳ ಮದ್ಯಕಾಲ. ಸೂರ್ಯನ ದರ್ಶನವಾಗಿ ಅದೆಷ್ಟು ದಿನಗಳಾಗಿದ್ದವೊ.. ಇನ್ನು ಬೆವರುವ ಮಾತೆಲ್ಲಿ?

ನೀನಾದರೂ ಅಷ್ಟೆ ಯಾವತ್ತು ನಾನು ನಿನಗಿಷ್ಟ ಅನ್ನುವ ಹಾಗೆ ನಡೆದುಕೊಳ್ಳಲಿಲ್ಲ. ಅಸಲಿಗೆ ನೀನು ಯಾವ ಹುಡುಗರನ್ನು ಕಣ್ಣೆತ್ತಿ ಕೂಡ ನೋಡುತ್ತಿರಲಿಲ್ಲ ಬಿಡು. ಆದರೆ ಒಂದು ಹುಡುಗಿ ಹೇಗಿರಬೇಕೊ ಹಾಗಿದ್ದೆ. ಈಗಲು ಹಾಗೆ ಇದ್ದೀಯ ಅದೇ ನಿನ್ನ ಇಷ್ಟಗಲ ಮಗುವಿನಂತಹ ನಗುವಿನೊಂದಿಗೆ. ಅದೇನ ನನಗಿಷ್ಟವಾಗಿದ್ದು? ಎಲ್ಲಾ ಹುಡುಗರ ಹಾಗೆ ನಾನು ಕೇವಲ ನಿನ್ನ ಮಾತಿಗೆ ನಿನ್ನ ನಗುವಿಗೆ ಕರಗಿಬಿಟ್ಟೆನ? ಇಲ್ಲ, ಸಾದ್ಯವೇ ಇಲ್ಲ. ನನಗೆ ಇಷ್ಟವಾಗಿದ್ದು ನೀನು ಅಷ್ಟೆ. ನಿನ್ನೊಳಗಿನ ಆ ನಗು ಮಾತ್ರವಲ್ಲ ಕಣೆ, ಅಮ್ಮನಂತ ಪ್ರೀತಿಯಿದೆ, ಅಕ್ಕನಂತಹ ಅಕ್ಕರೆಯಿದೆ. ಆದರೆ ನೋಡು ನನಗೆ ಇದ್ಯಾವುದನ್ನು ಅನುಭವಿಸುವ ಭಾಗ್ಯವೇ ಇಲ್ಲ. ನಾನು ಅನಾಥ ಅನ್ನುವ ಭಾವ ಕಾಡದಿರುತ್ತದ ಹೇಳು. ನೀನು ಬಿಡು ಎಲ್ಲ ಕುಲ್ಲಂ ಕುಲ್ಲ. ನಾನಿನ್ನು ನಿನಗೇನು ಹೇಳಿರಲೇ ಇಲ್ಲ. ಅಷ್ಟರಲ್ಲಿಯೇ ನೀನು, ಮಾತಿನ ಮದ್ಯೆ “ಈ ಪ್ರೀತಿ ಪ್ರೇಮ ಎಲ್ಲ ನನಗಿಷ್ಟ ಇಲ್ಲಪ್ಪ, ಅಪ್ಪಿತಪ್ಪಿ ಕೂಡ ನನ್ನ ಮೇಲೆ ಯಾವುದೇ ತರಹದ ಭಾವನೆಯಿಟ್ಟುಕೊಳ್ಳಬೇಡ ನಾವಿಬ್ಬರು ಗೆಳೆಯ ಗೆಳತಿಯರಾಗಿದ್ದರೇನೆ ಮಜಾ ಅಲ್ಲವ” ಅಂತ ಇಷ್ಟಗಲ ನಕ್ಕು ಬಿಟ್ಟು ಫೋನಿಟ್ಟೆ ನೆನಪಿದೆಯಾ? ಹೌದು ಹೌದು ಹೌದು ಅಂತ ನಾನು ನಕ್ಕು ಸುಮ್ಮನಾಗಿ ನೀನು ಪೋನಿಟ್ಟ ಮೇಲೆ ಬಿಕ್ಕುತ್ತಿದ್ದೆ.

ಇದೆಲ್ಲವನ್ನ ನಿನಗೆ ಫೋನಿನಲ್ಲೇ ಹೇಳಬಹುದಿತ್ತು. ನಿನ್ನ ಧ್ವನಿ ಕೇಳಿದ ಕೂಡಲೆ ಹೇಳಬೇಕಾಗಿರೊದನ್ನೆಲ್ಲ ಮರೆತು, ಮಂಗನ ಹಾಗೆ ಬಲವಂತದಿಂದ ಯಾವುದೋ ಜೋಕು ಹೇಳಿಕೊಂಡುಬಲವಂತದ ನಗುವನ್ನ ಮುಖದ ಮೇಲೆ ತಂದುಕೊಳ್ಳೊದಕ್ಕೆ ಒದ್ದಾಡುತ್ತೀನಿ. ಅದಕ್ಕೆ ಈ ಪತ್ರ. ಪತ್ರಬರೆದಾದ ಮೇಲಾದ್ರು ನಿನಗೆ ತಲುಪಿಸ್ತೀನಿ ಅನ್ನೊ ಬರವಸೆ ನನಗೂ ಇಲ್ಲ. ಒಂದು ಮಾತು,.. ನಿನ್ನ ನಿರಾಕಾರಣೆ ನನ್ನ ಜೀವನದಲ್ಲಿ ಒಂದು ಕಪ್ಪು ಚುಕ್ಕಿಯಷ್ಟೆ. ಆ ಕಪ್ಪು ಚುಕ್ಕಿ ಮರೆಯಾಗೊದು ಸ್ವಲ್ಪ ತಡವಾಗಬಹುದು. ಇದೇ ಕಾರಣಕ್ಕೆ ನಿನ್ನ ಮೇಲೆ ದ್ವೇಷ ಸಾದಿಸೊಲ್ಲ. ಕನಸಿನಲ್ಲಿಯೂ ಕೂಡ ನಿನ್ನ ಬಗ್ಗೆ ಕೆಡುಕು ಬಯಸೊಲ್ಲ. ಬಾರು ಪಬ್ಬುಗಳ ಗೆಳೆತನ ನನ್ನಿಂದಾಗಲ್ಲ. ಯಾಕಂದ್ರೆ ನಾನು ನಿನ್ನ ಗೆಳೆಯ. ನೀನು ಇಷ್ಟು ಒಳ್ಳೆಯವಳಾಗಿರುವಾಗ ನಾನು ಹೇಗೆ ಅಷ್ಟು ಕೆಟ್ಟವನಾಗಿರೋಕೆ ಸಾದ್ಯ? ಇನ್ನು ತುಂಬಾ ತುಂಬಾ ಹೇಳೋದಿತ್ತು. ಇಷ್ಟು ಹೇಳೋಷ್ಟರಲ್ಲಿಯೇ ಯಾಕೊ ಕಣ್ಣುಗಳೆಲ್ಲ ನೀರು ನೀರಾಗಿ ಪತ್ರವೆಲ್ಲ ಒದ್ದೆಯಾಗುತ್ತಿದೆ. ಉಳಿದಿದ್ದು ನನ್ನೊಳಗೆ ಉಳಿದು ಬಿಡಲಿ ಬಿಡು. ನಾನು ಅಳಿಯುವ ತನಕ

ಇಂತಿ ನಿನ್ನ ಪ್ರೀತಿಯ
ಕರಿಯ. . .

No comments: