ಮುನಿಸಿಕೊಂಡಿರುವ ಕರಿಯನಿಗೆ,
ಸುಬ್ಬಾ, ಅಂತು ನನಗೂ ಪತ್ರ ಬರೀಬೇಕು ಅನ್ನಿಸ್ತಿದೆ, ಇಲ್ಲ ಕಣೋ, ಮೊನ್ನೆ ನಾನು ಗಾಳಿ ಆಂಜನೇಯನ ದೇವಸ್ಥಾನಕ್ಕೆ ಬರಲಿಲ್ಲ ಅಂತ ನೀನು ಮುನಿಸ್ಕೊಂಡಿದೀಯ, ಬೆಣ್ಣೆ ಹಚ್ಚೋಕೆ ಈ ಪತ್ರ ಬರೀತಾವ್ಳೆ ಅನ್ಕೋಬೇಡ! ಇದುವರೆಗೆ ನೀನು ಬರ್ದಿರೋ ನೂರ ನಲವತ್ತಾರು ಪ್ರೀತಿ ತುಂಬಿದ ಪತ್ರಗಳ ಮುಂದೆ, ನನ್ನ ಈ ಪ್ರೇಮ ಪತ್ರ (?) ಸಪ್ಪೆ ಸಪ್ಪೆಯಾಗಿ ಕಾಣುತ್ತೆ ಅಂತ ನಂಗೊತ್ತು ಪುಟ್ಟ, ಆದ್ರೆ ನಿನ್ನ ಮೇಲೆ ಆಣೆ ಮಾಡಿ ಹೇಳ್ತೀನಿ, ಆ ನೂರ ನಲವತ್ತಾರು ಪತ್ರಗಳಲ್ಲಿ ನೀನು ಬರ್ದಿರೋದಕ್ಕಿಂತ ಹೆಚ್ಚಾಗಿ ನಾನು ನಿನ್ನ ಪ್ರೀತಿಸ್ತೀನಿ. ಅಸಲಿಗೆ ಈ ಅಕ್ಷರಗಳೆಂಬ ಅಕ್ಷರಗಳಿಗೆ ನಮ್ಮ ಪ್ರೀತೀನ ವ್ಯಕ್ತಪಡಿಸೋ ಶಕ್ತಿ ಇದೆಯೇನೋ? ನಿನ್ನ ನೋಡಿದ ತಕ್ಷಣ ನನ್ನ ಕಣ್ಣಲ್ಲಿ ಮೂಡೋ ಮಿಂಚು, ನೀನು ಕೈ ಹಿಡ್ಕೊಂಡ್ರೆ ನನ್ನೆದೆಯಲ್ಲಾಗೋ ಸಂಭ್ರಮ, ನೀನು ಮುತ್ತಿಟ್ಟರೆ ಹೊಟ್ಟೆಯಾಳದಿಂದ ಹುಟ್ಟೋ ಖುಷಿಯ ನಡುಕ ಇದನ್ನೆಲ್ಲ ಅಕ್ಷರಗಳಲ್ಲಿ ಬರೆದು ಬಿಡೋಕೆ ಆಗುತ್ತ? ಬಿಡು ನಮ್ಮಿಬ್ಬರದೂ ಹುಚ್ಚಿಡಿದು ಸುರಿಯೋ ಮಳೆಗೆ ಬೊಗಸೆಯೊಡ್ಡೋ ಪ್ರಯತ್ನ!
ಆದ್ರೂ ಇವತ್ತು ಬರೀಲೇಬೇಕಂತ ಬರೀತಿದೀನಿ ಸುಬ್ಬಾ, ಸುಬ್ಬಾಐ ಲವ್ ಯು ಕಣೋ. ನನಗೆ ನೀನು ಬೇಕು, ಮತ್ತೆ ನೀನೇ ಬೇಕು ಅಷ್ಟೆ. ಇಲ್ಲ ಕಣೋ ಇದೊಂದು ಜನ್ಮವಿದೆ, ಇದಾದ ಮೇಲೆ ಇನ್ನಾರು ಜನ್ಮಗಳಿವೆ, ಆ ಆರು ಜನ್ಮಗಳು ನೀನು ನನ್ನ ಜೊತೇಲಿರ್ಬೇಕು ಅಂತ ನಾನು ಕೇಳೋಲ್ಲ. ಇದೊಂದೇ ಜನ್ಮದಲ್ಲಿ ಮುಂದಿನ ಸಾವಿರ ಜನ್ಮಗಳನ್ನು ನಾಚಿಸೋ ಹಾಗೆ ನಿನ್ನ ಜೊತೆ ಬದುಕಿ ಬಿಡಬೇಕು. ಒರಟೊರಟಾದ ನಿನ್ನ ಗಡ್ದ ಕೊಡುವ ಸಿಹಿ ನೋವಿನಲ್ಲಿ, ನನಗಷ್ಟೇ ಇಷ್ಟವಾಗೋ ನಿನ್ನ ಮೈಯ ಘಾಟಿನಲ್ಲಿ, ನಿನ್ನ ಮುದ್ದು ಮುದ್ದು ಮಾತಿನಲ್ಲಿ, ಉಸಿರುಗಟ್ಟಿಸೋ ನಿನ್ನ ಅಪ್ಪುಗೆಯಲ್ಲಿ, ಈ ಜನ್ಮ ಮುಗಿಸಿಬಿಡಬೇಕು.
ನಿನ್ನ ಜೊತೆ ಕಳೆಯೋ ಒಂದೊಂದು ಕ್ಷಣಾನೂ ಕಳೆದು ಹೋಗದ ಹಾಗೆ ಕಣ್ಣಲ್ಲಿ ಬಚ್ಚಿಟ್ಕೋ ಬಿಡ್ಬೇಕು. ನಿನ್ನ ಎದೆಯ ಅಷ್ಟೂ ರೋಮಗಳನ್ನ ನನ್ನ ತುಟಿಯಿಂದ ಮುದ್ದಿಸಬೇಕು. ಈ ಜನ್ಮ ಮತ್ತು ಈ ಜನ್ಮ ಪೂರ್ತಿ ಪೂರ್ತಿ ನನ್ನನ್ನೂ ಮರೆತು ನಿನ್ನವಳಾಗಿ ಬಿಡ್ಬೇಕು. ಇದಿಷ್ಟೇ ಅಲ್ವೋ ಸುಬ್ಬಾ ಇನ್ನು ನನ್ನ ಹುಚ್ಚು ಹುಚ್ಚು ಆಸೆಗಳ ಬಗ್ಗೆ ಹೇಳಿದ್ರೇ, ‘ಹೌದೇನೇ ಸುಬ್ಬಿ!!?’ ಅಂತ ನನ್ನ ಕೆನ್ನೆ ಕಚ್ಚಿ ಬಿಡ್ತೀಯ ನೀನು! ನಿನ್ನದು ಮಗುವಿನಂತಹ ಮನಸ್ಸು ಕಣೋ, ಅದನ್ಯಾವತ್ತೂ ನೋಯಿಸಬಾರದು ಅಂತ ಪ್ರತಿಜ್ಞೆ ಮಾಡಿಕೊಂಡಿದೀನಿ. ಆದರೇ ಜಗತ್ತಲ್ಲಿ ಇನ್ಯಾರಿಗೂ ಕೊಡದ ಕಷ್ಟಗಳನ್ನ ಪ್ರೇಮಿಗಳಿಗೇ ಕೊಡ್ತಾನೆ ನಿನ್ನ ದೇವರು ಇದೊಂದು ಸಾರಿ ನನ್ನ ಕ್ಷಮಿಸುಬಿಡು ಪುಟ್ಟಾ, ಈ ಉಸಿರಿರುವವರೆಗೆ ಮತ್ತೆ ನಿನ್ನ ನೋಯಿಸಲ್ಲ, ನನ್ನಾಣೆ!
ನಾಳೆ ಮಲ್ಲಿಗೆ ತೋಟದಲ್ಲಿ ಕಣ್ತುಂಬ ಪ್ರೀತಿ ತುಂಬ್ಕೊಂಡು ನಿನಗಾಗೇ ಕಾಯ್ತಿರ್ತೀನಿ, ನಿನಗಿಷ್ಟವಾಗೋ ಕಪ್ಪು ಚೂಡೀನೇ ಹಾಕ್ಕೊಂಡು ಬರ್ತೀನಿ. ತಲೆಗೆ ಚೂರೇ ಚೂರು ಹರಳೆಣ್ಣೆ ಹಾಕ್ಕೋತೀನೋ, ಇಲ್ಲಾಂದ್ರೆ ಇಷ್ಟುದ್ದದ ನನ್ನ ನಾಗ ಜಡೆ ಎಣಿಯೋದು ಕಷ್ಟ. ಆಮೇಲೆ ಅದರಿಂದಾನೆ ಮತ್ತೆ ತಡವಾಗುತ್ತೆ ನೋಡು, ಅದಕ್ಕೆ ಚೂರೇ ಚೂರು ಹರಳಣ್ಣೆ ಹಾಕಿ ನೀಟಾಗಿ ತಲೆ ಬಾಚ್ಕೊಂಡು, ಅಮ್ಮ ಮುಡಿಸೋ ದಾಸವಾಳ ಹೂವಿಗೆ ದಾರೀಲೇ ಒಂದು ಗತಿ ಕಾಣಿಸಿ, ನಿನ್ನ ಮಲ್ಲಿಗೆ ಮಾಲೆಗೆ ನನ್ನ ತಲೇಲಿ ಜಾಗ ಮಾಡಿಕೊಂಡು, ಆ ಮಲ್ಲಿಗೆ ಹೂಗಳ ಜೊತೆ, ಅದನ್ನರಸಿ ಬರುವ ದುಂಬಿಗಳ ಜೊತೆ, ಅದರೆದೆಯಿಂದ ಉಕ್ಕೋ ಪರಿಮಳದ ಜೊತೆ, ಇಷ್ಟಿಷ್ಟೇ ನಾಚಿಕೊಂಡು, ನಿನಗಾಗೇ ಕಾಯ್ತಿರ್ತೀನಿ. ನಿನ್ನ ಕೋಪವೆಲ್ಲಾ ಮರೆತು ಇದೊಂದ್ಸಲ ಬಂದ್ಬಿಡೋ ಕರಿಯಾ, ಮತ್ತೆ ನೀನು ಕೋಪಾನೇ ಮಾಡ್ಕೊಳ್ಳದ ಹಾಗೆ ಮುತ್ತಿನ ಮಳೆಗರೆದುಬಿಡ್ತೀನಿ. ಬರ್ತೀಯಲ್ವಾ?
ನಿನ್ನವಳೇ,
‘ ಚಿನ್ನು ’
Tuesday, October 27, 2009
Subscribe to:
Post Comments (Atom)
No comments:
Post a Comment